ರಾಷ್ಟ್ರೀಯ ಪ್ರಶಸ್ತಿ  -
ದೇಶಕ್ಕೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿದ ಗಣ್ಯರಿಗೆ ಆಯಾ ರಾಷ್ಟ್ರದ ಸರ್ಕಾರ ಮತ್ತು ಇತರ ಸರ್ಕಾರೇತರ ಸಂಸ್ಥೆಗಳು ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಮತ್ತು ಪುರಸ್ಕಾರ ಗಳನ್ನು ನೀಡುತ್ತಿವೆ.

ರಾಷ್ಟ್ರ ಪ್ರಶಸ್ತಿಗಳು ದೇಶದ ಅತ್ಯುನ್ನತ ಪ್ರಶಸ್ತಿಗಳಾಗಿವೆ. ಈ ಪ್ರಶಸ್ತಿಗಳನ್ನು ಪ್ರಮುಖವಾಗಿ ಸಮಾಜಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಹಿತ್ಯ, ಕಲೆ ಮತ್ತು ಸಂಗೀತ, ಕಲೆ, ರಕ್ಷಣೆ, ಶಾಂತಿ ಮತ್ತು ಸಹಬಾಳ್ವೆ, ಆಡಳಿತ ಮತ್ತು ಸುಧಾರಣೆ, ಶಿಕ್ಷಣ, ಕ್ರೀಡೆ, ಅಂತಾರಾಷ್ಟ್ರೀಯ ಸಂಬಂಧ ಸುಧಾರಣೆ, ರಾಜಕೀಯ, ಆರ್ಥಿಕ ಮತ್ತು ಕೈಗಾರಿಕಾಭಿವೃದ್ಧಿ, ಸಾಮಾಜಿಕಾಭಿವೃದ್ಧಿ, ಸಿನಿಮಾ ಮತ್ತು ಸಾಂಸ್ಕøತಿಕ ಚಟುವಟಿಕೆ ಮುಂತಾದ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದಂತಹ ಮಹನೀಯ ರನ್ನು ಭಾರತ ಸರ್ಕಾರ ಗುರುತಿಸಿ ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತ ಬಂದಿದೆ.

ಸ್ವಾತಂತ್ರ್ಯಾನಂತರ ರಾಷ್ಟ್ರಪ್ರಶಸ್ತಿಗಳ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಭಾರತ ಸರ್ಕಾರ ನೀಡಿತು. ಆ ಮೂಲಕ ವಿಶೇಷ ಸೇವೆ ನೀಡಿದವರನ್ನು ಗೌರವಿಸುವುದರ ಜೊತೆಯಲ್ಲಿ ಯುವ ಪೀಳಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮತ್ತು ಆಯಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಭಾರತ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ಕೆಳಕಂಡ ಪ್ರಶಸ್ತಿಗಳನ್ನು ನೀಡುತ್ತಿವೆ.

1. ಭಾರತ ರತ್ನ: ರಾಷ್ಟ್ರಪ್ರಶಸ್ತಿಗಳಲ್ಲೇ ಇದು ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಜನವರಿ 26ರ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ಕಲೆ, ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜಸೇವೆ, ಅಂತಾರಾಷ್ಟ್ರಿಯ ಸಂಬಂಧ ಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಈ ಪ್ರಶಸ್ತಿಯನ್ನು ವ್ಯಕ್ತಿಯ ಜೀವಿತ ಅವಧಿಯಲ್ಲಿ ಅಥವಾ ಮರಣೋತ್ತರವಾಗಿಯೂ ನೀಡಲಾಗುತ್ತದೆ. ಸಿ.ರಾಜಗೋಪಾಲಾಚಾರಿ, ಎಸ್.ರಾಧಾಕೃಷ್ಣನ್ ಮತ್ತು ಸಿ.ವಿ.ರಾಮನ್ ಈ ಮೂವರಿಗೆ ಪ್ರಥಮವಾಗಿ 1954ರಲ್ಲಿ ಪ್ರದಾನ ಮಾಡುವುದರ ಮೂಲಕ ಇದು ಸ್ಥಾಪಿತವಾಯಿತು. ಈ ಮಧ್ಯೆ 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರ ಈ ಪ್ರಶಸ್ತಿಯನ್ನು ಸ್ಥಗಿತಗೊಳಿಸಿತ್ತು. 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮುಂದುವರಿಸಿತು.

2. ಪದ್ಮ ಪ್ರಶಸ್ತಿ: ಭಾರತರತ್ನ ಪ್ರಶಸ್ತಿಯ ಅನಂತರ ಪದ್ಮ ಪ್ರಶಸ್ತಿಗಳು ದೇಶದ ಅತ್ಯುನ್ನತ ಪ್ರಶಸ್ತಿಗಳಾಗಿವೆ. ಕಲೆ, ಸಾಹಿತ್ಯ, ಸಮಾಜಸೇವೆ, ಕ್ರೀಡೆ, ರಾಜಕೀಯ, ಸಾರ್ವಜನಿಕ ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಇವನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಗಳನ್ನು 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರ ಸ್ಥಗಿತಗೊಳಿಸಿತ್ತು. ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಈ ಮೂರು ಪ್ರಶಸ್ತಿಗಳ ಸ್ವರೂಪ ಇಂತಿವೆ:

ಪದ್ಮ ವಿಭೂಷಣ: ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಎರಡನೆಯ ಸ್ಥಾನ ಇದಕ್ಕಿದೆ. ದೇಶದ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಹಾಗೂ ಅವಿಸ್ಮರಣೀಯ ಸೇವೆ ಸಲ್ಲಿಸಿದವರಿಗೆ ಮಾತ್ರ ನೀಡಲಾಗುವ ಈ ಪ್ರಶಸ್ತಿಯನ್ನು ಸಾರ್ವಜನಿಕ ಆಡಳಿತದಲ್ಲಿ ಸೇವೆ ಸಲ್ಲಿಸಿದಂತಹ ಸರ್ಕಾರಿ ಅಧಿಕಾರಿಗಳಿಗೂ ನೀಡಲಾಗುತ್ತಿದೆ.

ಪದ್ಮ ಭೂಷಣ: ಪ್ರಶಸ್ತಿಗಳಲ್ಲಿ ಇದಕ್ಕೆ ಮೂರನೆಯ ಸ್ಥಾನ. ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕøತಿ, ಸಿನಿಮಾ, ಸಮಾಜಸೇವೆ, ಸಾರ್ವಜನಿಕ ಆಡಳಿತ, ರಕ್ಷಣೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರು ಈ ಪ್ರಶಸ್ತಿಗೆ ಅರ್ಹರು. ಪ್ರತಿ ವರ್ಷ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸ ವದಲ್ಲಿ ರಾಷ್ಟ್ರಪತಿಗಳು ಪ್ರದಾನ ಮಾಡುವರು.

ಪದ್ಮಶ್ರೀ ಪ್ರಶಸ್ತಿ: ಪ್ರಶಸ್ತಿಗಳಲ್ಲಿ ಇದಕ್ಕೆ ನಾಲ್ಕನೆಯ ಸ್ಥಾನ. ಈ ಪ್ರಶಸ್ತಿಯನ್ನು ದೇಶದ ಯಾವುದೇ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದವರಿಗೆ ನೀಡಿ ಗೌರವಿಸಲಾಗುತ್ತಿದೆ.
3. ಶೌರ್ಯ ಪ್ರಶಸ್ತಿಗಳು: ಇವುಗಳನ್ನು ರಕ್ಷಣಾ ವ್ಯವಸ್ಥೆಯಲ್ಲಿ ನಿರತರಾಗಿರುವ ಯೋಧರಿಗೆ ನೀಡಿ ಗೌರವಿಸಲಾಗುತ್ತದೆ. ಕೆಲವರಿಗೆ ಮರಣೋತ್ತರವಾಗಿಯೂ ನೀಡಲಾಗುವುದು.
ಪರಮವೀರ ಚಕ್ರ: ಇದು ಶೌರ್ಯ ಪ್ರಶಸ್ತಿಗಳಲ್ಲಿಯೇ ಅತ್ಯುನ್ನತ ವಾದುದು. ದೇಶದ ಭದ್ರತಾ ವ್ಯವಸ್ಥೆಯಲ್ಲಿ ನಿರತರಾಗಿರುವ ಭೂದಳ, ನೌಕಾದಳ, ವಾಯುದಳದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶತ್ರುಗಳ ಎದುರು ಅಮೋಘ ಶೌರ್ಯ ಪ್ರದರ್ಶಿಸಿ ಆ ಮೂಲಕ ದೇಶದ ಭದ್ರತೆ ಕಾಪಾಡುವ ಯೋಧರಿಗೆ ತಮ್ಮ ಜೀವಿತ ಕಾಲದಲ್ಲಿ ಅಥವಾ ಮರಣೋತ್ತರವಾಗಿ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.

ಮಹಾವೀರ ಚಕ್ರ: ಶೌರ್ಯ ಪ್ರಶಸ್ತಿಗಳಲ್ಲಿ ಇದಕ್ಕೆ ಎರಡನೆಯ ಸ್ಥಾನ. ದೇಶದ ಭದ್ರತಾ ವ್ಯವಸ್ಥೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದವರಿಗೆ ಜೀವಿತ ಅವಧಿಯಲ್ಲಿ ಅಥವಾ ಮರಣೋತ್ತರವಾಗಿ ರಾಷ್ಟ್ರಪತಿಗಳು ಪ್ರದಾನ ಮಾಡುವರು.

ವೀರ ಚಕ್ರ: ಶೌರ್ಯ ಪ್ರಶಸ್ತಿಗಳಲ್ಲಿ ಇದಕ್ಕೆ ಮೂರನೆಯ ಸ್ಥಾನ. ಭಾರತದ ಭದ್ರತಾ ವ್ಯವಸ್ಥೆಯಲ್ಲಿ ನಿರತರಾಗಿರುವ ಯೋಧರಿಗೆ ಈ ಪ್ರಶಸ್ತಿಯನ್ನು ಜೀವಿತ ಅವಧಿಯಲ್ಲಿ ಅಥವಾ ಮರಣೋತ್ತರವಾಗಿ ನೀಡಿ ಗೌರವಿಸಲಾಗುತ್ತದೆ.

ಇತರೆ ಶೌರ್ಯ ಪ್ರಶಸ್ತಿಗಳು: ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ.

ಇತರೆ ರಾಷ್ಟ್ರ ಪ್ರಶಸ್ತಿಗಳು: (1) ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ: ಚಲನಚಿತ್ರ ರಂಗದಲ್ಲಿನ ಪ್ರಶಸ್ತಿಗಳಲ್ಲಿ ಇದಕ್ಕೆ ಅತ್ಯುನ್ನತ ಸ್ಥಾನ. 1969ರ ಭಾರತ ಚಲನಚಿತ್ರರಂಗದ ಪಿತಾಮಹ ದಾದಾ ಸಾಹೇಬರ ಹೆಸರಿನಲ್ಲಿ ಹಿಂದಿ ಚಲನಚಿತ್ರ ತಾರೆ ದೇವಿಕಾರಾಣಿಯವರಿಗೆ ನೀಡುವುದರ ಮೂಲಕ ಈ ಪ್ರಶಸ್ತಿ ಆರಂಭಗೊಂಡಿತು.

ಭಾರತೀಯ ಚಲನಚಿತ್ರರಂಗಕ್ಕೆ ಅಪಾರ ಹಾಗೂ ಅಮೋಘ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿಗಳು ಈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಾರೆ. ಕನ್ನಡದ ನಟ ರಾಜ್‍ಕುಮಾರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ (1995).

(2) ಭಾರತೀಯ ಜ್ಞಾನಪೀಠ ಪ್ರಶಸ್ತಿ: ಇದು ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು 1965ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಕರ್ನಾಟಕದ 7 ಸಾಹಿತಿಗಳು ಪಡೆದಿದ್ದಾರೆ.

(3) ಅರ್ಜುನ ಪ್ರಶಸ್ತಿ: 1961ರಲ್ಲಿ ಸ್ಥಾಪಿತವಾಯಿತು. ಭಾರತೀಯ ಕ್ರೀಡಾ ಕ್ಷೇತ್ರದ ಅತ್ಯುನ್ನತ ಕ್ರೀಡಾಪಟುಗಳಿಗೆ ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.

(4) ದ್ರೋಣಾಚಾರ್ಯ ಪ್ರಶಸ್ತಿ: ಇದು 1985ರಲ್ಲಿ ಸ್ಥಾಪನೆಯಾಯಿತು. ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಸತತವಾಗಿ ಮೂರು ವರ್ಷ ಅಮೋಘ ಸೇವೆ ಸಲ್ಲಿಸಿದ ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತಿದೆ.

(5) ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ: ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಯುವಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ 1991ರಲ್ಲಿ ಸ್ಥಾಪಿತವಾಯಿತು. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್‍ರವರಿಗೆ ನೀಡಿ ಗೌರವಿಸಲಾಯಿತು.

(6) ಶ್ರಮ ಪ್ರಶಸ್ತಿಗಳು: ಭಾರತ ಸರ್ಕಾರ ಭಾರತೀಯ ಕೈಗಾರಿಕಾ ಕ್ಷೇತ್ರದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಮೂಲಕ ಕೈಗಾರಿಕಾ ಉತ್ಪಾದನೆಯ ಗುಣಮಟ್ಟ ಹೆಚ್ಚಿಸಲು ಇದನ್ನು 1985ರಲ್ಲಿ ಸ್ಥಾಪಿಸಲಾಯಿತು. ಇವು ಈ ಕೆಳಕಂಡಂತಿವೆ:

ಶ್ರಮರತ್ನ: ಅತ್ಯುನ್ನತ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಇದು 1ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಇದು ಶ್ರಮ ಪ್ರಶಸ್ತಿಗಳಲ್ಲಿಯೇ ಅತ್ಯುನ್ನತವಾದ್ದು.

ಶ್ರಮಭೂಷಣ: ಶ್ರಮ ಪ್ರಶಸ್ತಿಗಳಲ್ಲಿ 2ನೆಯ ಅತ್ಯುನ್ನತ ಪ್ರಶಸ್ತಿ ಯಾಗಿದೆ. ಇದು 50,000ರೂ. ನಗದು ಬಹುಮಾನ ಒಳಗೊಂಡಿದೆ.

ಶ್ರಮವಿಭೂಷಣ: ಇದಕ್ಕೆ 3ನೆಯ ಸ್ಥಾನ. 30,000ರೂ.ಗಳ ನಗದು ಬಹುಮಾನ ಒಳಗೊಂಡಿದೆ.

(7) ಸದ್ಭಾವನಾ ಪ್ರಶಸ್ತಿಗಳು: ಶಾಂತಿ, ಸಮಗ್ರತೆ, ಸಹಬಾಳ್ವೆ ಮತ್ತು ಮತೀಯ ಸಾಮರಸ್ಯ, ಅಂತಾರಾಷ್ಟ್ರೀಯ ಸಂಬಂಧ ಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡುವ ದೃಷ್ಟಿಯಿಂದ 1992ರಲ್ಲಿ ಸ್ಥಾಪನೆಗೊಂಡಿತು. ರಾಷ್ಟ್ರಪತಿಗಳು ಇದನ್ನು ಪ್ರದಾನ ಮಾಡುವರು.

(8) ರೋಟರಿ ಇಂಡಿಯ ಪ್ರಶಸ್ತಿ: ಮಕ್ಕಳು, ಮಹಿಳೆಯರು, ದೀನ ದಲಿತರು ಮುಂತಾದವರ ಅಭಿವೃದ್ಧಿಗೆ ಅತ್ಯಮೂಲ್ಯ  ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 1992ರಲ್ಲಿ ಇದನ್ನು ಸ್ಥಾಪನೆ ಮಾಡಲಾಯಿತು. ಇದು 1 ಲಕ್ಷ ರೂ. ನಗದು ಬಹುಮಾನ ಹೊಂದಿದೆ.

(9) ರಾಜೀವ್‍ಗಾಂಧೀ ಮಾನವ ಸೇವಾ ಪ್ರಶಸ್ತಿ: ಮಕ್ಕಳ ಸೇವೆಯಲ್ಲಿ ಮತ್ತು ಪೋಷಣೆಯಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಿ ಗೌರವಿಸಲಾಗುತ್ತಿದೆ. ಇದು 1994ರಲ್ಲಿ ಸ್ಥಾಪಿತವಾಯಿತು.

(10) ಪ್ರಭಾ ಪುರಸ್ಕಾರ ಪ್ರಶಸ್ತಿ: ಈ ಪ್ರಶಸ್ತಿಯನ್ನು ಕಲ್ಕತ್ತ (ಕೊಲ್ಕೊತ) ವಾಣಿಜ್ಯ ಮಹಾಸಂಘ ನೀಡುತ್ತದೆ. ಸಾಮಾಜಿಕ ಅಭಿವೃದ್ಧಿಗೆ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. 1994ರಲ್ಲಿ ಪರಿಸರವಾದಿ ಮೇಧಾ ಪಾಟ್ಕರ್ ಅವರಿಗೆ ಪ್ರದಾನ ಮಾಡಲಾಯಿತು.

(11) ಕೆ.ಕೆ.ಬಿರ್ಲಾ ಫೌಂಡೇಶನ್ ಕ್ರೀಡಾ ಪ್ರಶಸ್ತಿ: ಕ್ರೀಡಾ ಕ್ಷೇತ್ರದಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಇದು ಪ್ರಶಸ್ತಿಪತ್ರ ಮತ್ತು 50,000ರೂ. ನಗದು ಬಹುಮಾನ ಒಳಗೊಂಡಿದೆ.

(12) ಕಲಾರತ್ನ ಪ್ರಶಸ್ತಿ: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದವರಿಗೆ ಇದನ್ನು ನೀಡಿ ಗೌರವಿಸಲಾಗುತ್ತಿದೆ.

(13) ಸರಸ್ವತಿ ಸಮ್ಮಾನ್ ಪ್ರಶಸ್ತಿ: ಭಾರತೀಯ ಭಾಷೆ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯನ್ನು ಕೆ.ಕೆ.ಬಿರ್ಲಾ ಫೌಂಡೇಶನ್ 1991ರಲ್ಲಿ ಸ್ಥಾಪಿಸಿದೆ. ಇದು 3 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

(14) ವ್ಯಾಸ್ ಸಮ್ಮಾನ್ ಪ್ರಶಸ್ತಿ: ಕೆ.ಕೆ.ಬಿರ್ಲಾ ಫೌಂಡೇಶನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದನ್ನು 1991ರಲ್ಲಿ ಸ್ಥಾಪಿಸಲಾಯಿತು. 1.5ಲಕ್ಷ ನಗದು ಬಹುಮಾನ ಒಳಗೊಂಡಿದೆ.

(15) ಭಾರತ್ ಸೂರ್ಯ ಸಮ್ಮಾನ್ ಪ್ರಶಸ್ತಿ: ಈ ಪ್ರಶಸ್ತಿಯನ್ನು ಭಯೋತ್ಪಾದನೆ ನಿವಾರಣೆ, ಪ್ರಜಾಪ್ರಭುತ್ವ ಧೋರಣೆ, ಮತೀಯ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ, ದೇಶದ ಶಾಂತಿ ಮತ್ತು ಸಮಗ್ರತೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿದೆ.

(16) ಕಾಳಿದಾಸ ಸಮ್ಮಾನ್ ಪ್ರಶಸ್ತಿ: ಈ ಪ್ರಶಸ್ತಿಯನ್ನು ಮಧ್ಯ ಪ್ರದೇಶ ಸರ್ಕಾರ ನೀಡುತ್ತಿದೆ. ಇದನ್ನು ರಂಗಭೂಮಿ ಕಲಾವಿದರಿಗೆ ನೀಡಲಾಗುತ್ತಿದೆ. ಇದು 1 ಲಕ್ಷ ರೂ. ನಗದು ಬಹುಮಾನವನ್ನು ಹೊಂದಿದೆ.

(17) ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ: ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದಂದು ಈ ಪ್ರಶಸ್ತಿಯನ್ನು ನೀಡುತ್ತಿದೆ. ಇದು 1 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

(18) ಗಾಂಧೀ ಪ್ರಶಸ್ತಿ: ಇದು ಅಂತಾರಾಷ್ಟ್ರೀಯ ಪ್ರಶಸ್ತಿ. ಇದನ್ನು ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ಕುಷ್ಠರೋಗ ನಿವಾರಣೆಯಲ್ಲಿ ಅಮೋಘ ಸೇವೆ ಸಲ್ಲಿಸಿದವರಿಗೆ ಇದನ್ನು ನೀಡಲಾಗುತ್ತಿದೆ.		
	
(ವೈ.ಎಸ್.ಎಸ್.)

ವಿವಿಧ ದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದವರಿಗೆ ನೀಡಲಾಗುವ ಅಂತಾರಾಷ್ಟ್ರೀಯ ಪ್ರಶಸ್ತಿಗಳಿವು: ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಅಮೆರಿಕದ ಎಡ್ವರ್ಡ್ ಡೊಲೇಜಲ್ ಪ್ರಶಸ್ತಿ, ಚಾಲ್ರ್ಸ್ ಎಫ್.ಕೆಟ್ಟರಿಂಗ್ ಪ್ರೈಜ್, ವೂಲ್ಫ್ ಪ್ರೈಜ್ (ಇಸ್ರೇಲ್) ಲಂಡನ್ನಿನ ರಾಯಲ್ ಸೊಸೈಟಿಯ ಹ್ಯೂಗಸ್ ಮೆಡಲ್, ರಷ್ಯದ ವುಕ್ ವ್ರಾಹೋವಕ್ ಅವಾರ್ಡ್ ಮುಖ್ಯವಾದುವು. ಸಾಹಿತ್ಯ ಕ್ಷೇತ್ರದಲ್ಲಿ ಪೆನ್ ಅಥವಾ ಅಮೆಜಾನ್ ಡಾಟ್ ಕಾಮ್ ಶಾರ್ಟ್ ಸ್ಟೋರಿ ಅವಾರ್ಡ್, ಡಬ್ಲಿನ್‍ನ ರಿಚೆಸ್ಟ್ ಫಿಕ್ಶನ್ ಪ್ರೈಜ್, ಅಮೆರಿಕದ ಬೂಕರ್ ಅವಾರ್ಡ್ ಮುಖ್ಯವಾದುವು. ಸಂಗೀತ ಹಾಗೂ ಕಲಾ ಕ್ಷೇತ್ರದಲ್ಲಿ ಬ್ರಿಟ್ ಅವಾರ್ಡ್, ರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್, ಜರ್ಮನಿಯ ಎಕೋಸ್ ಪ್ರೈಜ್, ವಲ್ರ್ಡ್ ಮ್ಯೂಸಿಕ್ ಅವಾರ್ಡ್, ಸ್ವೀಡನ್ನಿನ ಪೋಲಾರ್ ಪ್ರೈಜ್, ಟೋನಿ ಅವಾರ್ಡ್, ಅಮೆರಿಕದ ಗ್ರಾಮಿ ಅವಾರ್ಡ್, ಲ್ಯಾಟಿನ್ ಗ್ರಾಮಿ ಅವಾರ್ಡ್ ಮುಖ್ಯವಾದುವು. ಚಲನ ಚಿತ್ರ ಕ್ಷೇತ್ರದಲ್ಲಿ ನೈಟ್ ಕಮಾಂಡರ್ಸ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮೆರಿಟ್ (ಜರ್ಮನಿ) ಹಾಲಿವುಡ್‍ನ ಆಸ್ಕರ್ ಅವಾರ್ಡ್, ಇರ್ವಿಂಗ್ ಥಾಲ್‍ಬರ್ಗ್ ಮೆಮೋರಿಯಲ್ ಅವಾರ್ಡ್, ಕ್ಯಾನ್ನಸ್ ಫಿಲ್ಮ್ ಫೆಸ್ಟಿವಲ್, ಬಿ.ಎ.ಎಫ್.ಟಿ.ಎ ಅವಾರ್ಡ್, ನೈಟ್ ಆಫ್ ಲೆಟರ್ಸ್ ಆಂಡ್ ಆಟ್ರ್ಸ್, ವೆನಿಸ್ ಫಿಲ್ಮ್ ಫೆಸ್ಟಿವಲ್, ಲೊಕಾರ್ನೊ ಫಿಲ್ಮ್ ಫೆಸ್ಟಿವಲ್, ಗೋಲ್ಡನ್ ಕೊಂಚ್ ಅವಾರ್ಡ್, ಐ.ಎಫ್.ಎಫ್.ಕೆ.ಅವಾರ್ಡ್, ಐ.ಎಫ್.ಎಫ್.ಐ. ಗೋಲ್ಡನ್ ಪಿಕಾಕ್ ಅವಾರ್ಡ್ ಹಾಗೂ ಗೋಲ್ಡನ್ ಗ್ಲೋಬ್ ಅವಾರ್ಡ್‍ಗಳು ಮುಖ್ಯವಾಗಿವೆ. ಶಾಂತಿ ಹಾಗೂ ಸೌಹಾರ್ದಕ್ಕಾಗಿ ಚಾರ್ಲ್‍ಮಗನ್ ಪ್ರೈಜ್, ಗಾಂಧೀ ಇಂಟರ್‍ನ್ಯಾಶನಲ್ ಪೀಸ್ ಅವಾರ್ಡ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮಾಧ್ಯಮಗಳಿಗೆ ನೀಡುವ ಪ್ರಶಸ್ತಿಗಳಲ್ಲಿ ಯುನೆಸ್ಕೊ ನೀಡುವ ಇಂಟರ್‍ನ್ಯಾಶನಲ್ ಪ್ರೆಸ್ ಫ್ರೀಡಂ ಪ್ರೈಜ್, ಅಮೆರಿಕದ ಪುಲಿಟ್ಜರ್ ಪ್ರೈಜ್, ಪುಲಿಟ್ಜರ್ ಪ್ರೈಜ್ ಫಾರ್ ಫಿಕ್ಶನ್, ಎಮ್ಮಿ ಅವಾರ್ಡ್, ಪ್ರೆಸ್ ಫ್ರೀಡಂ ಅವಾರ್ಡ್, ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಅವಾರ್ಡ್ ಫಾರ್ ಹ್ಯೂಮನ್ ರೈಟ್ಸ್ ಜರ್ನಲಿಸಮ್ ಹಾಗೂ ಜಾರ್ಜ್ ಪೋಲ್ಕ್ ಅವಾರ್ಡ್ ಮುಖ್ಯವಾದುವಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ